top of page

ಏ.14 ರಂದು ಬಾಬೂಜೀ, ಡಾ.ಬಿ.ಆರ್.ಅಂಬೇಡ್ಕರ್ ಜಯಂತ್ಯುತ್ಸವ ಅದ್ದೂರಿ ಆಚರಣೆಗೆ ಜಿಲ್ಲಾಡಳಿತ ಸನ್ನದ್ಧ.

  • Writer: newsnowvijayanagar
    newsnowvijayanagar
  • Mar 21
  • 2 min read

ವಿಜಯನಗರ (ಹೊಸಪೇಟೆ), : ಹಸಿರು ಕ್ರಾಂತಿ ಹರಿಕಾರ, ಮಾಜಿ ಉಪ ಪ್ರಧಾನಿ ಡಾ.ಬಾಬು ಜಗಜೀವನ ರಾಂ ರವರ ಜನ್ಮ ದಿನವನ್ನು ಏ.5 ರಂದು ನಗರದಲ್ಲಿರುವ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ಸರಳವಾಗಿ ಆಚರಿಸಿ ಹಾಗೂ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಜನ್ಮದಿನ ಏ.14 ರಂದು ಇಬ್ಬರು ಮಹನೀಯರ ಜಯಂತ್ಯುತ್ಸವನ್ನು ಅದ್ದೂರಿಯಾಗಿ ಆಚರಿಸಲು ಜಿಲ್ಲಾಡಳಿತ ಸನ್ನದ್ಧವಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ಹೇಳಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸಮಾಜ ಕಲ್ಯಾಣ ಇಲಾಖೆ ನೇತೃತ್ವದಲ್ಲಿ ಏರ್ಪಡಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಡಾ.ಬಾಬು ಜಗಜೀವನ್ ರಾಂರವರ ಜಯಂತಿಯ ಪೂರ್ವಭಾವಿ ಸಭೆ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕುಂದು ಕೊರತೆ ಸಭೆಯ ಅಧ್ಯಕ್ಷತೆ ವಹಿಸಿ ಗುರುವಾರ ಮಾತನಾಡಿದರು, ಕಳೆದೆರಡು ವರ್ಷಗಳಿಂದ ಜಯಂತಿಯನ್ನು ಸರಳವಾಗಿ ಆಚರಿಸಲಾಗಿದೆ. ಈ ಬಾರಿ ಜಿಲ್ಲಾಡಳಿತದಿಂದ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಅದ್ದೂರಿ ಆಚರಣೆಗೆ ಸಿದ್ದವಿದೆ. ಏ.5 ರಂದು ನಗರದ ಡಾ.ಬಾಬು ಜಗಜೀವನರಾಂ ವೃತ್ತದಲ್ಲಿ ಸಾಂಕೇತಿಕವಾಗಿ ಆಚರಣೆ ಮಾಡಿ. ಏ.14 ರಂದು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್‌ರವರ ಜಯಂತಿ ಜತೆಗೆ ಬಾಬೂಜೀ ಅವರ ಜಯಂತಿಯನ್ನು ಆಚರಿಸೋಣ. ಇಬ್ಬರು ಮಹನೀಯರ ಭಾವಚಿತ್ರಗಳನ್ನು ನಗರದ ಜಂಬುನಾಥ ದೇವಸ್ಥಾನ ರಸ್ತೆಯ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಿಂದ ಜೈ ಭೀಮ್ ವೃತ್ತದವರಗೆ ವಿವಿಧ ವಾದ್ಯ, ಕಲಾ ತಂಡಗಳೊಂದಿಗೆ ಭವ್ಯ ಮೆರವಣಿಗೆಯನ್ನು ನಡೆಸಲಾಗುವುದು ಎಂದರು.

ಸಭೆಯಲ್ಲಿ ನಗರದ ಪ್ರಮುಖ ಬೀದಿ, ವೃತ್ತಗಳಲ್ಲಿ ವಿದ್ಯುತ್ ದೀಪಲಂಕಾರ ಮಾಡಬೇಕು. ಎಲ್ಲಾ ಶಾಲಾ ಕಾಲೇಜು ಸೇರಿ ಸರ್ಕಾರಿ ಕಚೇರಿಗಳಲ್ಲಿ ಕಡ್ಡಾಯವಾಗಿ ಜಯಂತಿ ಆಚರಣೆಗೆ ಕ್ರಮವಹಿಸಬೇಕು. ಜಯಂತಿ ದಿನದಂದು ಸರ್ಕಾರಿ ನೌಕರರು, ಅಧಿಕಾರಿಗಳು ರಜಾದಿನ ಎಂದು ಭಾವಿಸದೇ ಜಯಂತಿಯಲ್ಲಿ ಪಾಲ್ಗೊಳ್ಳಬೇಕು. ಮಹನೀಯರ ಕುರಿತು ಉಪನ್ಯಾಸ, ವಿಚಾರ ಸಂಕಿರಣಗಳನ್ನು ನಡೆಸುವ ಮೂಲಕ ಅವರ ತತ್ವಾದರ್ಶ ಮತ್ತು ಸಿದ್ದಾಂತಗಳನ್ನು ಯುವಜನತೆಗೆ ಜಾಗೃತಿ ಮೂಡಿಸುವಂತೆ ಆಯೋಜಿಸಬೇಕು. ವೇದಿಕೆ ಕಾರ್ಯಕ್ರಮದಲ್ಲಿ ಪ್ರಗತಿಪರ ಸ್ವಾಮೀಜಿಗಳು, ದಲಿತ ಸಾಹಿತಿಗಳು, ಪ್ರಗತಿ ಪರ ಚಿಂತಕರನ್ನು ಆಹ್ವಾನಿಸಿ ಉಪನ್ಯಾಸ ನಡೆಸಬೇಕು. ದಲಿತ ಸಂಘಟನೆಗಳ ಹೋರಾಟಗಾರರು, ಅಪ್ರತಿಮ ಸಾಧಕರು, ಕಲಾವಿದರು, ಸಮಾಜ ಸೇವಕರನ್ನು ಗುರುತಿಸಿ ಜಿಲ್ಲಾಡಳಿತದಿಂದ ಗೌರವಿಸಿ ಸನ್ಮಾನಿಸಬೇಕು. ಏ.14 ರಂದು ಶಾಲಾ ಕಾಲೇಜುಗಳಲ್ಲಿ ಸಂವಿಧಾನ ಪೀಠಿಕೆ ಓದುವಂತೆ, ಸಂವಿಧಾನದ ಕೈಪಿಡಿ ಹಾಗೂ ಇಬ್ಬರು ಮಹನೀಯರ ಬದುಕು ಮತ್ತು ಸಾಧನೆಯ ಬಗ್ಗೆ ಕಿರುಪುಸ್ತಕಗಳನ್ನು ಮುದ್ರಿಸಿ ಉಚಿವಾಗಿ ವಿತರಿಸುವಂತೆ ವಿವಿಧ ಸಂಘಟನೆಗಳ ದಲಿತ ಮುಖಂಡರು ಸಲಹೆ ನೀಡಿದರು.

ಎಸ್ಸಿ, ಎಸ್ಟಿ ಕುಂದು ಕೊರತೆ ಸಭೆ : ನಗರದ ಬಳ್ಳಾರಿ ರಸ್ತೆಯಲ್ಲಿರುವ ದಲಿತರ ರುದ್ರಭೂಮಿ ಅಭಿವೃದ್ಧಿ, ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು. ಈಗಾಗಲೇ ಶೇ.30 ರಷ್ಟು ಭೂಮಿ ಒತ್ತುವರಿಯಾಗಿದೆ. ತೆರವಿಗೆ ಜಿಲ್ಲಾಡಳಿತ ಕ್ರಮವಹಿಸಬೇಕು. ಅಭಿವೃದ್ಧಿ ಕೊರತೆಯಿಂದ ರುದ್ರಭೂಮಿ ಜಾಗದಲ್ಲಿ ಅಕ್ರಮ, ಅನೈತಿಕ ಚಟುವಟಿಕೆಗಳು ನಡೆಯುತ್ತಿವೆ. ಬಯಲು ಶೌಚ ಪ್ರದೇಶವಾಗಿದೆ. ಶೀಘ್ರವೇ ಗಮನಹರಿಸುವಂತೆ ಮುಖಂಡರೊಬ್ಬರು ತಿಳಿಸಿದರು. ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು ಕೇವಲ 15 ದಿನಗಳಲ್ಲಿ ರುದ್ರಭೂಮಿ ಜಾಗವನ್ನು ಪರಿಶೀಲಿಸಿ ಅಗತ್ಯ ಸೌಕರ್ಯಗಳನ್ನು ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.

ಜಯಂತಿ ಅದ್ದೂರಿ ಆಚರಣೆಗಳಿಂದ ದಲಿತರ ಬಡತನ ನಿರ್ಮೂಲನೆ ಸಾಧ್ಯವಿಲ್ಲ. ನಗರದಲ್ಲಿ ಸುಮಾರು 8 ಸಾವಿರಕ್ಕೂ ಹೆಚ್ಚು ಕುಟುಂಬಗಳು ನಿವೇಶನ ರಹಿತರು ಇದ್ದಾರೆ. ಬಾಡಿಗೆ ಮನೆಗಳಲ್ಲಿ ವಾಸಿಸುತ್ತಿದ್ದಾರೆ. ನಗರಸಭೆಯಿಂದ ಸರ್ವೇ ನಡೆಸಿ ಸರ್ಕಾರಿ ನಿವೇಶನದಲ್ಲಿ ಸೂಕ್ತ ವಸತಿ ಸೌಲಭ್ಯಗಳನ್ನು ಪ್ರತಿ ಅಂಬೇಡ್ಕರ್ ಜಯಂತಿಗೆ ಹಂತ ಹಂತವಾಗಿ ವಿತರಿಸುವಂತೆ. ಹಾಗೂ ಎಸ್ಸಿ ಕಾಲೋನಿಗಳಲ್ಲಿ ಅಕ್ರಮ ಮದ್ಯ ಮಾರಾಟ ಯಥೇಚ್ಛವಾಗಿ ನಡೆಯುತ್ತಿದೆ. ಮೊರಾರ್ಜಿ ದೇಸಾಯಿ ವಸತಿ ಶಾಲೆಗಳನ್ನು ಹೆಚ್ಚಿಸಬೇಕು. ಎಸ್ಸಿ, ಎಸ್ಟಿ ವಿದ್ಯಾರ್ಥಿಗಳಿಗೆ ನಿಗದಿತ ವೇಳೆ ವಿದ್ಯಾರ್ಥಿ ವೇತನ ಪಾವತಿಸುತ್ತಿಲ್ಲ. ವಿಶೇಷವಾಗಿ ದೇವದಾಸಿ ಮಕ್ಕಳಿಗೆ ಶೈಕ್ಷಣಿಕ ತರಬೇತಿ, ಐಎಎಸ್, ಕೆಎಎಸ್ ಸೇರಿ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ನೀಡಲು ಮುಂದಾಗಬೇಕು. ನಗರದಲ್ಲಿನ ಸಮಾಜ ಕಲ್ಯಾಣ ಇಲಾಖೆ ಡಾ.ಬಾಬು ಜಗಜೀವನರಾಂ ಭವನದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ದಲಿತ ಸಂಘಟನೆಗಳ ಉಪಯೋಗಕ್ಕಾಗಿ ಸ್ಥಳಾಂತರಿಸುವಂತೆ ಅನೇಕ ಬಾರಿ ಮನವಿ ಮಾಡಿದರೂ ಸ್ಪಂದಿಸುತ್ತಿಲ್ಲ. ಶೀಘ್ರವೇ ಖಾಲಿ ಮಾಡಿ ಸಂಘಟನೆಗಳ ಬಳಕೆ ನೀಡಬೇಕು ಎಂದು ಮನವಿ ಮಾಡಿದರು.

ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ಮಾತನಾಡಿ, ಸಮಾಜ ಕಲ್ಯಾಣ ಇಲಾಖೆ ಕಚೇರಿ ಸ್ಥಳಾಂತರಕ್ಕೆ ಪರಿಶೀಲನೆ ನಡೆಸಲಾಗುವುದು. ಈಗಾಗಲೇ ನಗರದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಭವನ ನಿರ್ಮಾಣಕ್ಕೆ 2 ಎಕರೆ ಭೂಮಿ ಖರೀದಿಸಲಾಗಿದೆ. ಶೀಘ್ರವೇ ಭವನ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗುವುದು ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಲ್.ಶ್ರೀಹರಿಬಾಬು, ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣಪ್ಪ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಲೀಂ ಪಾಷಾ, ಸಹಾಯಕ ಆಯುಕ್ತ ವಿವೇಕಾನಂದ, ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು, ದಲಿತ ಸಂಘಟನೆಗಳ ಪದಾಧಿಕಾರಿಗಳು, ಮುಖಂಡರು ಭಾಗವಹಿಸಿದ್ದರು.

Recent Posts

See All

Comentarios


bottom of page